Tuesday, 4 April 2017

ಘಮ ಘಮಾ ಘಮ್ಮಾಡಿಸ್ತಾವ ಮಲ್ಲಿಗಿ | ನೀ ಹೊರಟಿದ್ದೀಗ ಎಲ್ಲಿಗೀ

ಘಮ ಘಮಾ ಘಮ್ಮಾಡಿಸ್ತಾವ ಮಲ್ಲಿಗಿ | ನೀ ಹೊರಟಿದ್ದೀಗ ಎಲ್ಲಿಗೀ ?
ಘಮ ಘಮಾ..................... || ಪಲ್ಲವಿ ||


ತುಳುಕ್ಯಾಡತಾವ ತೂಕಡಿಕಿ
ಎವಿ ಅಪ್ಪತಾವ ಕಣ್ಣ ದುಡುಕಿ
ಕನಸು ತೇಲಿ ಬರತಾವ ಹುಡುಕಿ ||
ನೀ ಹೊರಟಿದ್ದೀಗ ಎಲ್ಲಿಗೀ ?


ಚಿಕ್ಕಿ ತೋರಿಸ್ತಾವ ಚಾಚಿ ಬೆರಳ
ಚಂದ್ರಮ ಕನ್ನಡಿ ಹರಳ
ಮನ ಸೋತು ಆಯಿತು ಮರುಳ ||
ನೀ ಹೊರಟಿದ್ದೀಗ ಎಲ್ಲಿಗೀ ?


ನೆರಳಲ್ಲಾಡತಾವ ಮರದ ಬುಡsಕ
ಕೆರಿ ತೆರಿ ನೂಗತಾವ ದಡಕs
ಹೀಂಗ ಬಿಟ್ಟು ಎಲ್ಲಿ ನನ್ನ ನಡsಕ
ನೀ ಹೊರಟಿದ್ದೀಗ ಎಲ್ಲಿಗೀ ?


ನನ್ನ ನಿನ್ನ ಒಂದತನದಾಗ
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ ||
ನೀ ಹೊರಟಿದ್ದೀಗ ಎಲ್ಲಿಗೀ ?


ಬಂತ್ಯಾಕ ನಿನಗ ಇಂದ ಮುನಿಸು
ಬೀಳಲಿಲ್ಲ ನನಗ ಇದರ ಕನಸು
ರಾಯ ತಿಳಿಯಲಿಲ್ಲ ನಿನ್ನ ಮನಸು ||
ನೀ ಹೊರಟಿದ್ದೀಗ ಎಲ್ಲಿಗೀ ?

- ಅಂಬಿಕಾತನಯದತ್ತ

No comments:

Post a Comment